ಔಟ್ರ್ಯಾಂ, ಸರ್ ಜೇಮ್ಸ್‌: 1803-63. ಭಾರತದ ಹುಚ್ಚು ಧೈರ್ಯದ ಮಡ್ಡಿಮನುಷ್ಯ - ಎಂಬ ಖ್ಯಾತಿಯ ಈತ ಇಂಗ್ಲೆಂಡಿನ ಡರ್ಬಶೈರಿನ ಬಟರ್ಲಿಹಾಲ್ ಎಂಬಲ್ಲಿ 1803ರಲ್ಲಿ ಜನಿಸಿದ. ಬಾಲ್ಯದಿಂದಲೇ ಸೈನ್ಯಕ್ಕೆ ಸೇರಬೇಕೆಂಬ ಆಸೆಯಿತ್ತಲ್ಲದೆ ಇದಕ್ಕೆ ತಕ್ಕ ದೃಢಕಾಯ, ಶೌರ್ಯ ಅವನಲ್ಲಿದ್ದುವು. ಎಳವೆಯಿಂದಲೂ ಒಳ್ಳೆಯ ಆಟಗಾರನೆಂದು ಪ್ರಸಿದ್ಧಿ ಗಳಿಸಿದ್ದು ತನ್ನ 16ನೆಯ ವರ್ಷದಲ್ಲಿ (1819) ಭಾರತದಲ್ಲಿ ಬ್ರಿಟಿಷ್ ಸೈನ್ಯದಲ್ಲಿ ಕಡಟ್ ಆಗಿ ನೇಮಕಗೊಂಡ. ಕಾಲಕಳೆದಂತೆ, ತನ್ನ ಯುಕ್ತಿ, ಶೌರ್ಯಗಳನ್ನು ಪ್ರದರ್ಶಿಸಿ ಮುಂಬಯಿಯಲ್ಲಿದ್ದ ಬ್ರಿಟಿಷ್ ಸೇನೆಗೆ ಮುಖ್ಯ ಸೇನಾಧಿಪತಿಯಾದ. ಬ್ರಿಟಿಷರು ಸಿಂಧ್ ಮತ್ತು ಆಫ್ಘಾನಿಸ್ತಾನಗಳಲ್ಲಿ ನಡೆಸಿದ ಯುದ್ಧಗಳಲ್ಲಿ ಭಾಗವಹಿಸಿ ಆ ಯುದ್ಧರಂಗ ಗಳಲ್ಲಿನ ತನ್ನ ಅನುಭವವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ. 1856-57ರಲ್ಲಿ ಬ್ರಿಟಿಷರು ಪರ್ಷಿಯದೊಡನೆ ಯುದ್ಧ ನಡೆಸಿದ ಸಂದರ್ಭದಲ್ಲಿ ಮಹತ್ತ್ವದ ಪಾತ್ರವಹಿಸಿ ಬ್ರಿಟಿಷರು ಜಯಗಳಿಸಲು ನೆರವಾದ.

ಔಟ್ರ್ಯಾಂ ಯುದ್ಧರಂಗಗಳಲ್ಲಿ ಹೇಗೋ ಹಾಗೆ ಆಡಳಿತ ಕ್ಷೇತ್ರದಲ್ಲೂ ಒಳ್ಳೆಯ ಕೀರ್ತಿ ಗಳಿಸಿದ ಭಾರತದಲ್ಲಿ ಬ್ರಿಟಿಷ್ ಸರ್ಕಾರ ಅವನಿಗೆ ಅನೇಕ ಸ್ಥಾನಮಾನಗಳನ್ನು ಕೊಟ್ಟಾಗ ಅಲ್ಲೆಲ್ಲ ತನ್ನ ಆಡಳಿತ ಶಕ್ತಿಯನ್ನು ಪ್ರದರ್ಶಿಸಿದ. 1847 ರಲ್ಲಿ ಸರ್ಕಾರ ಅವನನ್ನು ಬರೋಡದ ರೆಸಿಡೆಂಟನ್ನಾಗಿ ನೇಮಿಸಿದಾಗ ಅಧಿಕಾರಿಗಳ ಭ್ರಷ್ಟಾಚಾರಗಳನ್ನು ಬಂiÀÄಲಿಗೆಳೆದು ಆಡಳಿತ ಕ್ಷೇತ್ರದಲ್ಲಿ ಸೂಕ್ತವಾದ ಬದಲಾವಣೆಗಳನ್ನು ಮಾಡಿದ.
1854 ರಿಂದ ಎರಡು ವರ್ಷ ಲಖ್ನೌ ರೆಸಿಡೆಂಟನಾಗಿ ಕೆಲಸ ಮಾಡಿದ. ಔಧ್ ಪ್ರಾಂತ್ಯವನ್ನು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿಸುವ ಕಾರ್ಯದಲ್ಲಿ ಮಹತ್ತ್ವದ ಪಾತ್ರವನ್ನು ವಹಿಸಿದ. 1857ರ ಬಂಡಾಯದ ಸಂದರ್ಭದಲ್ಲಿ ಅಂದಿನ ಸರ್ಕಾರದ ಪರವಾಗಿ ತುಂಬ ಶ್ರಮಿಸಿದ. ಲಖ್ನೌ ನಗರವನ್ನು ಮತ್ತೆ ಬ್ರಿಟಿಷರ ವಶಕ್ಕೆ ತರುವುದರಲ್ಲಿ ನೆರವಾದ. ಬಂಡಾಯ ಕೊನೆಗೊಂಡ ಮೇಲೆ ವೈಸರಾಯ್ ಕ್ಯಾನಿಂಗನಿಗೆ ಬೆಂಬಲವಾಗಿ ನಿಂತು ದೇಶದಲ್ಲಿ ಶಾಂತಿ ಸ್ಥಾಪಿಸಲು ನೆರವು ನೀಡಿದ. ಸರ್ಕಾರದ ನೀತಿ ಇವನ ಪ್ರಭಾವದಿಂದಾಗಿ ಉದಾರವಾಯಿತು. ರಾಜನಿಯೋಗಿಯಾಗಿ ದಕ್ಷಿಣ ಸಿಂಧ್ (1839) ಮತ್ತು ಉತ್ತರ ಸಿಂಧ್ಗಳಲ್ಲಿ ಕೆಲಸ ಮಾಡಿದ. ಅಲ್ಲಿನ ಜಮೀನುದಾರರ ಬಗ್ಗೆ ಸರ್ ಚಾರಲ್ಸ್‌ ನೀಪಿಯರ್ ತಳೆದ ಧೊರಣೆಯನ್ನು ತೀವ್ರವಾಗಿ ವಿರೋಧಿಸಿ ಅವನಿಂದ ಭಾರತದ ಹುಚ್ಚು ಧೈರ್ಯದ ಮಡ್ಡಿ ಮನುಷ್ಯ ಎಂಬ ಟೀಕೆಗೆ ಒಳಗಾದ. ಔಟ್ರ್ಯಾಂ ಸೇವೆಯನ್ನು ಮೆಚ್ಚಿದ ಸರ್ಕಾರ ಅವನನ್ನು 1858 ರಲ್ಲಿ ಗೌರ್ನರ್ ಜನರಲ್ಲನ ಸಭೆಗೆ ಸದಸ್ಯನಾಗಿ ನೇಮಿಸಿತು. 1860ರವರೆಗೆ ಆ ಸ್ಥಾನದಲ್ಲಿದ್ದು ಅದೇ ವರ್ಷ ಇಂಗ್ಲೆಂಡಿಗೆ ಹಿಂತಿರುಗಿದ ಔಟ್ರ್ಯಾಂ ಫ್ರಾನ್ಸಿನಲ್ಲಿ ಅಸು ನೀಗಿದ.

ಇತಿಹಾಸದಲ್ಲಿ ಔಟ್ರ್ಯಾಂ ಧೀರಯೋಧನೆಂದು ಪ್ರಖ್ಯಾತನಾಗಿದ್ದಾನೆ. ಆಗಿನ ಕಾಲದ ಯುವಕರಿಗೆ ಶೌರ್ಯದಲ್ಲಿ, ಸಾಹಸದಲ್ಲಿ ಆತ ಮಾದರಿಯಾಗಿದ್ದ. ಭಿಲ್ಲರೆಂಬ ಕಾಡುಜನರ ಮಧ್ಯೆ ತಂಗಿ, ಅವರನ್ನು ಸುರಕ್ಷಿತವಾಗಿ ಒಂದು ಕಡೆ ನೆಲೆಯೂರುವಂತೆ ಈತ ಒತ್ತಾಯಮಾಡಿದ. ಇವನ ಸಾಹಸಗಳಿಗೆ, ಸೇವೆಗಳಿಗೆ ಮಾರುಹೋದ ಬ್ರಿಟಿಷ್ ಸರ್ಕಾರ ಇವನಿಗೆ ಅನೇಕ ಬಿರುದಾವಳಿಗಳನ್ನು ಕೊಟ್ಟು ಗೌರವಿಸಿತು. ಅಷ್ಟೇ ಅಲ್ಲದೆ ಜ್ಞಾಪಕಾರ್ಥವಾಗಿ ಲಂಡನ್ ನಗರದಲ್ಲಿ ಇವನ ಶಿಲಾಪ್ರತಿಮೆಯನ್ನು ಸಂಸ್ಥಾಪಿಸಲಾಯಿತು. ಸರ್ ಫ್ರೆಡರಿಕ್ ಗೋಲ್ಡ್‌ಸ್ಮಿತ್ ಎಂಬಾತ ಔಟ್ರ್ಯಾಂನ ಜೀವನಚರಿತ್ರೆಯನ್ನು ಎರಡು ಸಂಪುಟಗಳಲ್ಲಿ ಬರೆದಿದ್ದಾನೆ.	(ಬಿ.ಎಸ್.ಎ.; ಎಚ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ